ಆಸ್ತಿಕ ಸಜ್ಜನ ಬಂಧುಗಳೇ,
ನಮ್ಮ ಹಿರಿಯರು ನಂಬಿ, ಆರಾಧಿಸಿಕೊಂಡು ಬಂದಂತಹ ದೈವದೇವರುಗಳು ಅದೆಷ್ಟೋ. ಅವುಗಳಲ್ಲಿ ಒಂದು ನಮ್ಮ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನೀರುಮಾರ್ಗದ ಸಮೀಪದ ಹಚ್ಚಹಸಿರಿನ ಬೆಟ್ಟಗುಡ್ಡಗಳಿಂದ ಆವೃತವಾಗಿ ಕಂಗೊಳಿಸುವ ಪ್ರಕೃತಿದತ್ತವಾದ ಸುಂದರರಮಣೀಯವಾದ ಪ್ರದೇಶದಲ್ಲಿರುವ 'ಶ್ರೀ ಉಮಾಮಹೇಶ್ವರ ದೇವರ ಸನ್ನಿಧಾನ ಮತ್ತು ಸೀಮೆಯ ದೈವಗಳಾದ ಶ್ರೀ ವಾಜಿಲ್ಲಾಯ ಧೂಮಾವತಿ ದೈವಗಳ ಸಾನಿಧ್ಯ". ಪೆದಮಲೆ- ಭೌಗೋಳಿಕವಾಗಿ ಪಶ್ಚಿಮಭಾಗವು ಎತ್ತರವಾಗಿದ್ದು ಪೂರ್ವಭಾಗವು ತಗ್ಗಾಗಿದ್ದು ಮಧ್ಯಭಾಗದಲ್ಲಿ ವರ್ಷದ ಎಲ್ಲಾ ಸಮಯದಲ್ಲೂ ನೀರು ನಿತ್ಯವೂ ಹರಿದು ಹೋಗುವ ಮಾರ್ಗ ಅರ್ಥಾತ್ ಆಡುಭಾಷೆಯ "ತೋಡು" ಇರುವ ಕಾರಣ "ನೀರು ಮಾರ್ಗ" ಎಂಬ ಹೆಸರು ಬಂದಿರಬಹುದು ಎಂಬುದು ಐತಿಹ್ಯಕಾರರ ಚಿಂತನೆ. ಇದರ ಸಮೀಪದ ಎತ್ತರವಾದ "ಪಡ್ಡಾಯಿಯ ಮಲೆ" ಎಂದರೆ "ಪಶ್ಚಿಮದ ಕಾಡು" ಎಂದು ಕರೆಸಿಕೊಂಡು ತುಳುವಿನ "ಪಡ್ಡಾಯಿ ಮಲೆ" ಕ್ರಮೇಣ "ಪೆದಮಲೆ" ಎಂದು ಕರೆಯಲ್ಪಟ್ಟು ಇದು ದೈವ ದೇವರುಗಳು ನೆಲೆನಿಂತಿದ್ದ ಪವಿತ್ರ ತಾಣವಾಗಿತ್ತು.
ಈ ಗ್ರಾಮಕ್ಕೆ ಸೇರಿದ. ಶ್ರೀ ಉಮಾಮಹೇಶ್ವರ ದೇವಾಲಯದ ಜೀರ್ಣೋದ್ಧಾರ ನಿಮಿತ್ತವಾಗಿ ಅಷ್ಟಮಂಗಲ ಪ್ರಶ್ನಾಚಿಂತನೆಯನ್ನು ಇರಿಸಿದಾಗ, ದೇವಸ್ಥಾನದ ಸಮೀಪದಲ್ಲಿ ಶ್ರೀ ವಾಜಿಲ್ಲಾಯ ಧೂಮಾವತಿ ದೈವದ ಸಾನಿಧ್ಯ ಗೋಚರಿಸುತ್ತದೆ. ತರುವಾಯ ದೈವಸ್ಥಾನದ ಕುರುಹುಗಳನ್ನು ಅನ್ವೇಷಣೆ ನಡೆಸಿದಾಗ ಈ ಪ್ರದೇಶದಲ್ಲಿ ದೈವಸ್ಥಾನದ ಧ್ವಜಸ್ತಂಭ, ಅದನ್ನು ಹಿಡಿದಿಟ್ಟು ಧ್ವಜಾರೋಹಣಕ್ಕೆ ಬಳಸುತ್ತಿದ್ದ 2 ದೈವಸ್ಥಾನದ ಪ್ರಾಚೀನ ಕುರುಹುಗಳು ದಂಬೆಕಲ್ಲು, ಅದರಲ್ಲಿನ ಸೂರ್ಯಚಂದ್ರರ ಕೆತ್ತನೆ, ಕುದುರೆಯಮೇಲೆ ಸವಾರಿ ಮಾಡುವ ರೀತಿಯ ದೈವದ ಕೆತ್ತನೆಯ ಶಿಲ್ಪದ ಕುರುಹು ಇತ್ಯಾದಿಗಳು ಕಂಡುಬಂದವು. ಇದರ ಕುರಿತು ಉತ್ಪನನ ಮಾಡಿದಾಗ ಇದು ವಿಜಯನಗರದ ರಾಜರ ಆಳ್ವಿಕೆಯ ಕಾಲದ ದೈವಸ್ಥಾನವಾಗಿತ್ತು ಮತ್ತು ಆ ಕಾಲದಲ್ಲಿ ಕುಲಶೇಖರ ರಾಜರ ಅಧೀನದಲ್ಲಿದ್ದು, ರಾಜರ ಉಪಸ್ಥಿತಿಯಲ್ಲಿ ಈ ದೈವಸ್ಥಾನದಲ್ಲಿ ವೈಭವೋಪೇತವಾಗಿ ಧ್ವಜಾರೋಹಣವಾಗಿ ನೇಮ ನಡಾವಳಿ, ಬಂಡಿಯೇ ಮೊದಲಾದ ಉತ್ಸವಗಳು ಊರು ಸೇರಿ ವಿಜೃಂಭಣೆಯಿಂದ ನಡೆಯುತ್ತಿದ್ದ ಅತಿ ಪುರಾತನ ಕ್ಷೇತ್ರವಾಗಿದ್ದು, ಕಾರಣಿಕವಾಗಿ ದೈವನುಡಿಯಂತೆ ನಡೆಯುವ ಕ್ಷೇತ್ರವಾಗಿದೆ ಎನ್ನುವುದು ತಿಳಿಯಿತು. ಗ್ರಾಮಕ್ಕೆ ಸಂಬಂಧಪಟ್ಟ ದೈವಸ್ಥಾನವಾಗಿದ್ದು ಇದರ ವ್ಯಾಪ್ತಿಯು ಪೂರ್ವದಿಕ್ಕಿನಲ್ಲಿ ಅಡ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಶ್ಚಿಮದಲ್ಲಿ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ, ದಕ್ಷಿಣದಲ್ಲಿ ಮಾಣೂರು ಶ್ರೀ ಅನಂತಪದ್ಮನಾಭ ದೇವಸ್ಥಾನ, ಉತ್ತರದಲ್ಲಿ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನವಿದೆ. ಈ ದೈವಸ್ಥಾನಕ್ಕೆ ಸಂಬಂಧಪಟ್ಟ ಭಂಡಾರದ ಮನೆ ಪೆದಮಲೆಯಲ್ಲಿತ್ತು. ಈ ದೈವಸ್ಥಾನವು ಒಂಬತ್ತು ಪರಿಚಾರಕ ವರ್ಗಗಳಿಂದ ಕೂಡಿ ಊರ ಮತ್ತು ಪರವೂರ ಭಕ್ತಾಧಿಗಳಿಂದ ಆರಾಧಿಸಲ್ಪಡುತಿತ್ತು. ಕಾಲಕ್ರಮೇಣ ಶ್ರೀ ದೈವಗಳ ಆರಾಧನೆ ನಿತ್ಯವಿನಿಯೋಗಾದಿಗಳು, ನೇಮನೆರಿ, ಬಂಡೀ ಎಲ್ಲವೂ ನಿಂತು ಹೋಗಿ ದೈವಸ್ಥಾನವೇ ಬಿದ್ದುಹೋಯಿತು.
ಪ್ರಶ್ನೆ ಚಿಂತನೆಯಲ್ಲಿ ತಿಳಿದುಬಂದಂತೆ, 'ಶ್ರೀ ವಾಜಿಲ್ಲಾಯ ಧೂಮಾವತಿ ದೈವ'ಗಳ ದೈವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ಶ್ರೀ ಉಮಾಮಹೇಶ್ವರ ದೇವಾಲಯದ ಜೀರ್ಣೋದ್ದಾರದ ಮುಂಚಿತವಾಗಿ ನಡೆಸಬೇಕಾಗಿ ತಿಳಿದು ಬಂದಿರುತ್ತದೆ.
ಈ ಬಗ್ಗೆ ಕುಡುಪು ವಿದ್ವಾನ್ ಶ್ರೀ ಕೃಷ್ಣರಾಜ ತಂತ್ರಿವರ್ಯರ ನೇತೃತ್ವದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದುರಿತ ನಿವಾರಣೆಗೆ ಸಾನಿಧ್ಯ ಸ್ಥಳದಲ್ಲಿ ಪ್ರಾಯಶ್ಚಿತ್ತಗಳನ್ನು ನೆರವೇರಿಸಿ, ದೈವಸ್ಥಾನದ ಜೀರ್ಣೋದ್ಧಾರಕ್ಕೆ ಊರ ಹಾಗೂ ಪರವೂರ ಸಜ್ಜನರೊಳಗೊಂಡು ಟ್ರಸ್ಟ್ ರಚಿಸಿ ಈ ದೈವಸ್ಥಾನಕ್ಕೆ ಸಂಬಂಧಪಟ್ಟ ಪ್ರಧಾನ ನಾಗಬನದ ಜೀರ್ಣೋದ್ದಾರ ಸಂಪನ್ನಗೊಳಿಸಲಾಗಿದೆ.
'ಒಂದು ದೇವಾಲಯವನ್ನು ಪುನಃ ನಿರ್ಮಾಣ ಮಾಡುತ್ತೇನೆ' ಎಂಬ ಸಂಕಲ್ಪ ಮಾತ್ರವೇ ಹಲವು ಪಾಪಗಳನ್ನು ಕಳೆದು ಪುಣ್ಯ ಫಲವನ್ನು ಒದಗಿಸುತ್ತದೆ ಎಂಬುದು ಶಾಸ್ತ್ರ ಸಮ್ಮತವಾದ ಮಾತು. ಆ ಸಂಕಲ್ಪದೊಂದಿಗೆ, ತಂತ್ರಿವರ್ಯರ ನೇತೃತ್ವದಲ್ಲಿ ಬೇಕಾದ ದೈವಸ್ಥಾನದ ವಿನ್ಯಾಸವನ್ನು ರಚಿಸಿದ್ದು. ಈ ಕೆಳಕಂಡ ಕಾರ್ಯಗಳು ಸಂಪನ್ನಗೊಳ್ಳಬೇಕಿದೆ.
ಆಯ ಪ್ರಮಾಣಬದ್ಧವಾದ ನೂತನ ದೈವಸ್ಥಾನ, ಪ್ರಾಕಾರ ಗೋಡೆ, ಗೋಪುರ ನಿರ್ಮಾಣ.
ಅಶ್ವವಾಹನ, (ಕುದುರೆ ರೂಪವಿರುವ ಬಂಡಿ), ಸೂಕರವಾಹನ (ಹಂದಿ ರೂಪವಿರುವ ಬಂಡಿ), ಧ್ವಜಸ್ತಂಭ,
ಭಂಡಾರ ಮತ್ತು ನೂತನ ಭಂಡಾರದ ಚಾವಡಿ.
ಆ ಪ್ರಯುಕ್ತ ಈಗಾಗಲೇ ಇಟ್ಟ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಇದೆಲ್ಲವೂ ಹೊಸದಾಗಿ ನಿರ್ಮಾಣವಾದ ಮೇಲೆ ದೈವಸ್ಥಾನದಲ್ಲಿ ಧ್ವಜಾರೋಹಣವಾಗಿ ಕನಿಷ್ಠ ಮೂರು ದಿವಸಗಳ ವರ್ಷಾವಧಿಯ ನೇಮ, ಬಂಡೀಜಾತ್ರೆಯನ್ನು ಗ್ರಾಮದ ಭಕ್ತ ಜನರೆಲ್ಲರೂ ಸೇರಿ ನಡೆಸಬೇಕಾಗಿದೆ.
ಈ ಜೀರ್ಣೋದ್ದಾರದ ಮಹಾಕಾರ್ಯಕ್ಕೆ ಸರಿ ಸುಮಾರು ಒಂದುವರೆ ಕೋಟಿಗಿಂತಲೂ ಹೆಚ್ಚಿನ ಖರ್ಚು ವೆಚ್ಚಗಳಾಗಬಹುದು ಎಂದು ಅಂದಾಜಿಸಲಾಗಿದೆ. ಈವರೆಗೆ ದೈವಸ್ಥಾನದ ಪ್ರತಿಯೊಂದು ಸೇವಾಕಾರ್ಯವೂ ಶ್ರೀ ದೇವರ ಅನುಗ್ರಹದಿಂದ ಮತ್ತು ಭಕ್ತಜನರ ಉದಾರ ದೇಣಿಗೆಯಿಂದ ಸುಸೂತ್ರವಾಗಿ ನಡೆದುಕೊಂಡು ಬಂದಿದೆ. ಇನ್ನು ನಡೆಯಬೇಕಾದ ಜೀರ್ಣೋದ್ದಾರದ ಮಹಾಕಾರ್ಯವೂ ಶ್ರೀ ದೈವಗಳು ಮತ್ತು ಆ ಭಗವಂತ ನಮ್ಮೆಲ್ಲರಿಂದ ಮಾಡಿಸುತ್ತಾನೆ ಎನ್ನುವ ಅಚಲವಾದ ವಿಶ್ವಾಸವಿದೆ.
"ಪ್ರಯತ್ನವಿಲ್ಲದೆ ಫಲ ದೊರಕದು" ಇದು ಭಗವಂತ ಭಗವದ್‌ಗೀತೆಯಲ್ಲಿ ನಮಗೆಲ್ಲಾ ನೀಡಿದ ಮಹಾನ್ ಸಂದೇಶ, ಆ ದೃಷ್ಟಿಯಿಂದ ಭಗವದ್ ಭಕ್ತ ಬಂಧುಗಳೆಲ್ಲರೂ ಈ ದಿವ್ಯ ಸೇವೆಯಲ್ಲಿ ಬಂದು ಭಾಗವಹಿಸಿ ನಮ್ಮ ಜೀವನದಲ್ಲಿ ಬರುವ ಈ ಸದವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮಿಂದ ಏನು ಸಾಧ್ಯವೋ ಆ ಸಾಧ್ಯತೆಯನ್ನು ಸಮರ್ಪಣಾಭಾವದಿಂದ ಸಾಕಾರಗೊಳಿಸಿ ತನುವಿನಿಂದ ಸಾಧ್ಯವಾದ ಶ್ರಮದಾನ, ಮನದಿಂದ ಸಾಧ್ಯವಾದ ಆರೋಗ್ಯ ಪೂರ್ಣ ಸಲಹೆ, ಮತ್ತೊಬ್ಬರಿಂದ ದೇಣಿಗೆ ಸಂಗ್ರಹ, ಇನ್ನು ಭಗವಂತ ತಮಗೆ ಕೊಟ್ಟ ಧನ ಸಂಪತನ್ನು ಇಚ್ಛಾನುಸಾರ ದೈವಗಳ ಗುಡಿ ಗೋಪುರದ ನಿರ್ಮಾಣಕ್ಕೆ ಉದಾರಿಗಳಾಗಿ ನೀಡಿ, ಮತ್ತೆ ನೀರುಮಾರ್ಗದ ಗ್ರಾಮದಲ್ಲಿ ಧ್ವಜವೇರಿ ನೇಮಉತ್ಸವ ನಡೆದು ಹಿಂದಿನ ಗತಕಾಲದ ವೈಭವವು ಮತ್ತೆ ಮರುಕಳಿಸುವಂತಾಗಲಿ ಮತ್ತು ನೇಮ ನಡಾವಳಿ, ಬಂಡೀ, ಉತ್ಸವ, ಜಾತ್ರೆಗಳು ನಡೆದು ದೈವದ ಅನುಗ್ರಹ ಸರ್ವರಿಗೂ ಪ್ರಾಪ್ತಿಯಾಗಿ ಊರು ಸುಭಿಕ್ಷೆಯಿಂದ ನೆಲೆಸಲಿ ಎಂಬ ಆಶಯ. ತನ್ಮೂಲಕ ದೈವದೇವರುಗಳ ಕಾರ್ಣಿಕದ ಅನುಗ್ರಹಕ್ಕೆ ಸಕಲರೂ ಪಾತ್ರರಾಗಬೇಕಾಗಿ ವಿನಂಬ್ರವಾದ ವಿನಂತಿ.
ವಿದ್ವಾನ್ ಶ್ರೀ ಕೆ. ಕೃಷ್ಣರಾಜ ತಂತ್ರಿ ತಂತ್ರಿವರ್ಯರು, ಶ್ರೀ ಕ್ಷೇತ್ರ ಪೆದಮಲೆ
ಡಾ| ವೈ. ಭರತ್ ಶೆಟ್ಟಿ, ಶಾಸಕರು ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಕ್ಷೇತ್ರ ಪೆದಮಲೆ
ಶ್ರೀ ಮನೋಜ್ ಕುಮಾರ್ ಸರಿಪಲ್ಲ ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ
ಶ್ರೀ ಗಿರಿಧರ ಶೆಟ್ಟಿ ಅಧ್ಯಕ್ಷರು, ಶ್ರೀ ವಾಜಿಲ್ಲಾಯ ಧೂಮಾವತೀ ದೈವಸ್ಥಾನ ಟ್ರಸ್ಟ್ (ರಿ.)
ಶ್ರೀ ಭಾಸ್ಕರ್ ಕೆ. ಗೌರವಾಧ್ಯಕ್ಷರು, ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನ ಟ್ರಸ್ಟ್ (ರಿ.)
ಶ್ರೀಮತಿ ಲೀಲಾವತಿ ಭಟ್ ಗೌರವಾಧ್ಯಕ್ಷರು, ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನ ಟ್ರಸ್ಟ್ (ರಿ.)
ಶ್ರೀ ಸಿ.ಕೆ. ರವಿಪ್ರಸನ್ನ ಶ್ರೀ ವೆಂಕಟಕೃಷ್ಣ ಭಟ್ ಗೌರವ ಸಲಹೆಗಾರರು ಶ್ರೀ ವಾಜಿಲ್ಲಾಯ ಧೂಮಾವತೀ ದೈವಸ್ಥಾನ ಟ್ರಸ್ಟ್ (ರಿ.)