ಪ್ರಕೃತಿ ಮನೋಹರವಾದ ನೀರುಮಾರ್ಗ ಗ್ರಾಮದ ಪೆದಮಲೆ ಎಂಬ ಪ್ರದೇಶದಲ್ಲಿ ಸುಮಾರು ಐದುನೂರು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ದೇವಸ್ಥಾನವೇ ಶ್ರೀ ಉಮಾಮಹೇಶ್ವರ ದೇವಸ್ಥಾನ ಪೆದಮಲೆ. ಬಂಟ ಸಮುದಾಯಕ್ಕೆ ಸೇರಿದ ಪೆದಮಲೆ ಗುತ್ತಿನವರ ಪೂರ್ವಿಕರಿಂದ ಸಕಲ ಕಷ್ಟ ಪರಿಹಾರಕ್ಕಾಗಿ, ಇಷ್ಟಾರ್ಥ ಅನುಗ್ರಹಕ್ಕಾಗಿ ನೆಲೆನಿಂತ ದೇವರು, ಸಂಕ್ರಾಂತಿ ಪೂಜೆಯೊಂದಿಗೆ, ಶಿವರಾತ್ರಿ ಉತ್ಸವದಂತಹ ಆರಾಧನೆಗಳಿಂದ ಭಕ್ತರನ್ನು ಅನುಗ್ರಹಿಸುತ್ತಾ ಇದ್ದಾನೆ. ಇದೇ ಸಮಯದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ದಾರ ಪ್ರಕ್ರಿಯೆಯೂ ನಡೆಯಲಿದ್ದು, ಶಿಲಾಮಯಗರ್ಭಗೃಹದೊಂದಿಗೆ ತೀರ್ಥಮಂಟಪ, ಸುತ್ತುಪೌಳಿ, ಆವರಣಗೋಡೆ, ಭೋಜನಶಾಲೆ, ತೀರ್ಥಬಾವಿ ಇವುಗಳ ನವನಿರ್ಮಾಣ ನಡೆಯಲಿದೆ.
ಪೆದಮಲೆ ಗುತ್ತಿನ ಅಧಿಪತಿಗಳಾದ ತಲಪಾಡಿ ಮನೆತನದವರಿಗೆ ಕಾಲಾಂತರದಲ್ಲಿ ಅನೇಕ ವಿಧವಾದ ಕಷ್ಟಕಾರ್ಪಣ್ಯಗಳು ಕಂಡುಬಂದ ಸಂದರ್ಭದಲ್ಲಿ, ಪ್ರಾಜ್ಞರ ನಿರ್ದೇಶನದಂತೆ ಪೆದಮಲೆಗುತ್ತು ಮನೆಗೆ ಸಮೀಪವಿರುವ ನೈರುತ್ಯ ಭಾಗದ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ನೂತನ ದೇವಾಲಯವನ್ನು ನಿರ್ಮಿಸಿ, ಕಾಶಿಯಿಂದ ತಂದ ನೂತನ ಶಿವಲಿಂಗವನ್ನು ಪ್ರತಿಷ್ಟಾಪಿಸಿ ಪೂಜಿಸಲು ಪ್ರಾರಂಭಿಸಿದರು. 19ನೇ ಶತಮಾನದಲ್ಲಿ ಈ ದೇವರ ಪ್ರತಿಷ್ಠಾಪನೆಯು ನಡೆದಿದ್ದು, ಶ್ರೀ ಬ್ರಹ್ಮಲಿಂಗೇಶ್ವರ ಎಂಬ ಸಂಕಲ್ಪದೊಂದಿಗೆ ಕಾಶ್ಯಪಗೋತ್ರದ ಕಂಬಾರಣ್ಣ ಕುಲದ ಭಟ್ರಕೋಡಿ ವೆಂಕಟಕೃಷ್ಣ ಭಟ್ ಇವರ ಹಿರಿಯರಿಂದ ತಿಂಗಳಿಗೊಂದು ಪೂಜೆಯೊಂದಿಗೆ ಶ್ರೀ ದೇವರ ಆರಾಧನೆಯು ನಡೆಯುತ್ತಾ ಇತ್ತು. ಕಾಲಕ್ರಮೇಣ ಈ ದೇವಾಲಯವು ಗ್ರಾಮಸ್ಥರ ನಿರ್ವಹಣೆಗೆ ಒಳಪಟ್ಟು ದೇವಾಲಯದಲ್ಲಿ ಶಿವರಾತ್ರಿ ಉತ್ಸವವೇ ಮೊದಲಾದ ಆರಾಧನಾ ವ್ಯವಸ್ಥೆಗಳು ನಡೆಯುತ್ತಾ ಇದೆ.
ಈ ದೇವಾಲಯದ ಅಭಿವೃದ್ಧಿಯ ದೃಷ್ಟಿಯಿಂದ ಜ್ಯೋತಿಷ್ಯದ ನಿರ್ದೇಶನ ಪ್ರಕಾರ 'ಶ್ರೀ ಉಮಾಮಹೇಶ್ವರ ದೇವಸ್ಥಾನ' ಎಂಬ ಅಭಿಧಾನದೊಂದಿಗೆ ಶ್ರೀ ದೇವಸ್ಥಾನದಲ್ಲಿ ಅನೇಕ ಪರಿಹಾರ ಪ್ರಕ್ರಿಯೆಗಳು ನಡೆದಿರುತ್ತದೆ. ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ದಾರ ನಿಮಿತ್ತವಾಗಿ ಅಷ್ಟಮಂಗಲ ಪ್ರಶ್ನೆಯನ್ನು ಇರಿಸಿದಾಗ ದೇವಸ್ಥಾನದ ಜೀರ್ಣೋದ್ದಾರದ ಮೊದಲು ಶ್ರೀ ವಾಜಿಲ್ಲಾಯ ಧೂಮಾವತಿ ದೈವಗಳ ಜೀರ್ಣೋದ್ಧಾರ ಆಗಬೇಕಾಗಿ ಎಂಬ ಸೂಚನೆಯೂ ದೊರಕಿರುತ್ತದೆ. ಈ ರೀತಿ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ನಿರ್ಮಾಣಕ್ಕೆ ಬೇಕಾದ ಸ್ಥಳವನ್ನು ದಿ। ಕುಡುಪು ಪದ್ಮನಾಭ ರಾಯರ ಕುಟುಂಬದವರು ಹಾಗೂ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಬೇಕಾಗುವ ಸ್ಥಳವನ್ನು ಬೆಳ್ಳುಳ್ಳಿಮಾರು ಗುತ್ತು ರಘುರಾಮ ಶೆಟ್ಟಿ ಹಾಗೂ ಕುಟುಂಬದವರು ನೀಡುತ್ತೇವೆ ಎಂಬ ಭರವಸೆಯನ್ನೂ ನೀಡಿರುತ್ತಾರೆ.
ಶ್ರೀ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಅಷ್ಟಮಂಗಲ ಪ್ರಶ್ನೆಯನ್ನು ಇರಿಸಿದ ಸಂದರ್ಭದಲ್ಲಿ, ಸಂಪೂರ್ಣ ನಶಿಸಿದ ಶ್ರೀ ವಾಜಿಲ್ಲಾಯ ಧೂಮಾವತಿ ದೈವಗಳ ದೈವಸ್ಥಾನ ಇತ್ಯಾದಿಗಳನ್ನು ಪ್ರಥಮವಾಗಿ ಜೀರ್ಣೋದ್ಧಾರ ಮಾಡಬೇಕೆಂಬ ಸೂಚನೆಯೂ ಕಂಡುಬಂದಿರುತ್ತದೆ. ಈ ದೈವಸ್ಥಾನವು ಇಡೀ ಗ್ರಾಮಕ್ಕೆ ಸಂಬಂಧಿಸಿದ ದೈವಸ್ಥಾನವಾಗಿದ್ದು, ಗ್ರಾಮದಲ್ಲಿ ನಾಲ್ಕು ಕಡೆ ದೈವಗಳ ಆರಾಧನೆ ನಡೆಯುತ್ತಾ ಇತ್ತು. ಈ ದೈವಸ್ಥಾನಕ್ಕೆ ಪ್ರಾಚೀನ ಕಾಲದಲ್ಲಿ ಬಹಳ ಭೂಸಂಪತ್ತು ಇದ್ದು, ಒಂಭತ್ತು ವಿಭಾಗದ ಪಂಚರಕವರ್ಗದವರು ಇದ್ದರು. ಗಟ್ಟಿ ಸಮಾಜ ಬಾಂಧವರ ಆರಾಧ್ಯ ದೈವ ವಾಜಿಲ್ಲಾಯಿ ದೈವದ ಮೂಲಸ್ಥಳವಾಗಿರುತ್ತದೆ. ದೈವಸ್ಥಾನದಲ್ಲಿ ಧ್ವಜಾರೋಹಣ, ಬಂಡಿ ಉತ್ಸವ ಸಹಿತವಾಗಿ ಮೂರು ದಿವಸದ ನೇಮೋತ್ಸವವು ರಾಜರ ಉಪಸ್ಥಿತಿಯಲ್ಲಿ ನಡೆಯುತ್ತಾ ಇದ್ದು, ಕಾಲಕ್ರಮೇಣ ನೇಮೋತ್ಸವವನ್ನು ನಿಲ್ಲಿಸಿ, ದೈವಸ್ಥಾನವು ಸಂಪೂರ್ಣವಾಗಿ ಜೀರ್ಣವಾಗಿ ಬಿದ್ದುಹೋದ ಲಕ್ಷಣಗಳು ಕಾಣಿಸುತ್ತವೆ. ಇದರಿಂದಾಗಿ ಇಡೀ ಗ್ರಾಮಕ್ಕೆ ದೈವದ ಪ್ರಕೋಪ ಕಾಣಿಸುತ್ತದೆ. ಈ ದೈವಸ್ಥಾನ ವ್ಯಾಪ್ತಿಯು ಪೂರ್ವದಿಕ್ಕಿನಲ್ಲಿ ಮಾಣೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ದಕ್ಷಿಣದಲ್ಲಿ ಅಡ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಶ್ಚಿಮದಲ್ಲಿ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ, ಉತ್ತರದಲ್ಲಿ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದವರೆಗೆ ಇರುತ್ತದೆ.
ಪೆದಮಲೆ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕಿಂತಲೂ ಪ್ರಾಚೀನ ಆರಾಧ್ಯ ಸ್ಥಳ ಈ ದೈವಸ್ಥಾನವಾಗಿದ್ದು, ಈಗಲೂ ಈ ಮಣ್ಣಿನಲ್ಲಿ ಶ್ರೀ ವಾಜಿಲ್ಲಾಯ ಧೂಮಾವತಿ ದೈವಗಳ ಸಾನಿಧ್ಯ ಅಂತರ್ಲೀನವಾಗಿದೆ. ಶ್ರೀ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ಆಯ ಪ್ರಮಾಣಬದ್ಧವಾಗಿ ದೈವಸ್ಥಾನ, ಪ್ರಾಕಾರಗೋಡೆ, ಬಾವಿ, ಗೋಪುರ, ಅಶ್ವವಾಹನ (ಕುದುರೆ ಬಂಡಿ), ಸೂಕರವಾಹನ (ಹಂದಿಬಂಡಿ),ಧ್ವಜಸ್ತಂಭ ಇವುಗಳ ನಿರ್ಮಾಣ ಆಗಬೇಕಾಗಿದೆ. ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಮೀಪ, ಪೆದಮಲೆಗುತ್ತು ನೂತನ ಭಂಡಾರ ಚಾವಡಿಯನ್ನು ನಿರ್ಮಿಸಿ, ನೂತನ ಉಯ್ಯಾಲೆಯನ್ನು ನಿರ್ಮಿಸಿ, ನೂತನ ಮುಖಮೂರ್ತಿ, ಆಯುಧಗಳನ್ನು ಇಟ್ಟು, ನಿತ್ಯ ಆರಾಧನೆ, ಸಂಕ್ರಾಂತಿ ಆರಾಧನೆಗಳನ್ನು ನಡೆಸಬೇಕಾಗಿದೆ. ದೈವಸ್ಥಾನದಲ್ಲಿ ಧ್ವಜಾರೋಹಣವಾಗಿ ಕನಿಷ್ಠ ಎರಡು ದಿವಸದ ನೇಮೋತ್ಸವವನ್ನು ಬಂಡಿ ಉತ್ಸವ ಸಹಿತವಾಗಿ ನಡೆಸಬೇಕಾಗಿದೆ. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯನ್ನು ಇಟ್ಟು ಸೂಕ್ತ ನಿರ್ದೇಶನವನ್ನು ಪಡೆದುಕೊಂಡು, ಪರಿಹಾರ ಪ್ರಾಯಶ್ಚಿತ್ತ ಕಾರ್ಯಗಳನ್ನು ನಡೆಸಿ, ವಾಸ್ತುಶಿಲ್ಪಕ್ಕೆ ಅನುಸಾರವಾಗಿ ಆಯಪ್ರಮಾಣಬದ್ಧವಾದ ನಕ್ಷೆ ಮತ್ತು ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ.
ನಮ್ಮ ನಡೆ ಶಿವನಡೆಗೆ - ಫೆಬ್ರವರಿ 2020 | ಫೋಟೋ ಆಲ್ಬಮ್
ಶ್ರೀಗಿರಿಧರ್ ಶೆಟ್ಟಿ
ಅಧ್ಯಕ್ಷರು,
ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನ ಟ್ರಸ್ಟ್
ಶ್ರೀ ಕ್ಷೇತ್ರ ಪೆದಮಲೆ
ಶ್ರೀ ಮನೋಜ್ ಕುಮಾರ್ ಸರಿಪಲ್ಲ
ಅಧ್ಯಕ್ಷರು,
ಜೀರ್ಣೋದ್ಧಾರ ಸಮಿತಿ
ಶ್ರೀ ಕ್ಷೇತ್ರ ಪೆದಮಲೆ